ಪಂತ್, ಗೋವಿಂದ ವಲ್ಲಭ
	1887-1961. ಭಾರತ ರಾಷ್ಟ್ರೀಯ ಕಾಂಗ್ರೆಸಿನ ಒಬ್ಬ ಪ್ರಮುಖರು ; ಸ್ವಾತಂತ್ರ್ಯ ಹೋರಾಟಗಾರರು ; ಸಂಯುಕ್ತ ಪ್ರಾಂತ್ಯಗಳ, ಉತ್ತರ ಪ್ರದೇಶದ ಮುಖ್ಯಮಂತ್ರಿಯೂ ಅನಂತರ ಭಾರತದ ಗೃಹ ವ್ಯವಹಾರಗಳ ಮಂತ್ರಿಯೂ ಆಗಿದ್ದವರು. ಜನನ 1887ರ ಸೆಪ್ಟೆಂಬರ್ 10 ರಂದು, ಈಗಿನ ಉತ್ತರ ಪ್ರದೇಶದ ಆಲ್ಮೋರ ಜಿಲ್ಲೆಯಲ್ಲಿ. ಅವರು ಅಲಹಬಾದ್ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಲ್.ಎಲ್.ಬಿ. ಪದವಿಗಳನ್ನು ಪಡೆದರು. ನೈನಿತಾಲಿನಲ್ಲಿ ಅತ್ಯಂತ ಯಶಸ್ವಿಯಾಗಿ ವಕೀಲವೃತ್ತಿ ನಡೆಸಿದರು. ಮೊದಲಿನಿಂದಲೂ ಅವರು ರಾಜಕೀಯದಲ್ಲಿ ಕ್ರಿಯಾತ್ಮಕವಾದ ಪಾತ್ರ ವಹಿಸುತ್ತಿದ್ದರು. 1916ರಲ್ಲಿ ಕುಮಾಂವ್ ಪರಿಷತ್ತನ್ನು ಸ್ಥಾಪಿಸಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಸತತ ಪ್ರಯತ್ನ ಕೈಗೊಂಡರು. ಅದೇ ವರ್ಷ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಗೂ 1927ರಲ್ಲಿ ಸಂಯುಕ್ತ ಪ್ರಾಂತ್ಯಗಳ (ಈಗಿನ ಉತ್ತರ ಪ್ರದೇಶ) ವಿಧಾನ ಪರಿಷತ್ತಿಗೂ ಆಯ್ಕೆಯಾದರು. ಏಳುವರ್ಷಗಳ ಕಾಲ ಅವರು ವಿಧಾನ ಪರಿಷತ್ತಿನಲ್ಲಿ ಸ್ವರಾಜ್ಯ ಪಕ್ಷದ ಹಾಗೂ ವಿರೋಧ ಪಕ್ಷಗಳ ನಾಯಕರಾಗಿ ಸೇವೆ ಸಲ್ಲಿಸಿದರು. 1927ರಲ್ಲಿ ಅವರು ಸಂಯುಕ್ತ ಪ್ರಾಂತ್ಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಚುನಾಯಿತರಾದರು. ಅದರ ಆಲಿಗಢ ಅಧಿವೇಶನದಲ್ಲಿ ಅಧ್ಯಕ್ಷರಾಗಿದ್ದರು. 1928ರಲ್ಲಿ ಸೈಮನ್ ಆಯೋಗ ಬಂದಾಗ ನಡೆದ ವಿರೋಧ ಪ್ರದರ್ಶನಗಳಲ್ಲಿ ಭಾಗವಹಿಸಿದ್ದವರಲ್ಲಿ ಪಂತರು ಪ್ರಮುಖರು. ಆಗ ಅವರು ಲಾಠಿ ಏಟು ತಿಂದು ತೀವ್ರವಾಗಿ ಗಾಯಗೊಂಡರು.

	1930-32ರಲ್ಲಿ ಅವರು ಸತ್ಯಾಗ್ರಹದಲ್ಲಿ ಭಾಗವಹಿಸಿ ಎರಡು ಬಾರಿ ಕಾರಾಗೃಹಕ್ಕೆ ಹೋದರು. 1931ರಲ್ಲಿ ಅವರು ಪ್ರಾಂತೀಯ ಕಾಂಗ್ರೆಸ್ ನೇಮಿಸಿದ ಸಂಯುಕ್ತ ಪ್ರಾಂತ್ಯಗಳ ವ್ಯವಸಾಯ ಸಂಬಂಧ ಸಮಿತಿಯ ಅಧ್ಯಕ್ಷರಾಗಿದ್ದರು. ಆ ಪ್ರಾಂತ್ಯದಲ್ಲಿ ಮುಂದೆ ವ್ಯವಸಾಯ ಸುಧಾರಣೆಯನ್ನು ಕೈಗೊಳ್ಳಲು ಈ ಸಮಿತಿ ಸಲ್ಲಿಸಿದ ಶಿಫಾರಸ್ಸುಗಳು ಆಧಾರಭೂತವಾದುವು.

	ಪಂತರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾದ್ದು 1931ರಲ್ಲಿ. 1934ರಲ್ಲಿ ಅವರು ಅಖಿಲ ಭಾರತ ಪಾರ್ಲಿಮೆಂಟರಿ ಬೋರ್ಡಿನ ಸಾಮಾನ್ಯ ಕಾರ್ಯದರ್ಶಿಗಳಾಗಿ, ಕೇಂದ್ರ ವಿಧಾನ ಸಭೆಯ ಸದಸ್ಯರಾಗಿ, ವಿಧಾನ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪನಾಯಕರಾಗಿ ಚುನಾಯಿತರಾದರು.

	1937ರಲ್ಲಿ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ಸು ಅಧಿಕಾರ ಸ್ವೀಕರಿಸಿದಾಗ ಪಂತರು ಸಂಯುಕ್ತ ಪ್ರಾಂತ್ಯಗಳಲ್ಲಿ ಮೊದಲನೆಯ ಕಾಂಗ್ರೆಸ್ ಮಂತ್ರಿಮಂಡಲ ರಚಿಸಿದರು. 1940ರಲ್ಲಿ ವೈಯಕ್ತಿಕ ಸತ್ಯಾಗ್ರಹ ನಡೆದಾಗ ಪಂತರು ಅದರಲ್ಲಿ ಭಾಗವಹಿಸಿ ಒಂದು ವರ್ಷದ ಕಾರಾಗೃಹ ಶಿಕ್ಷೆ ಅನುಭವಿಸಿದರು. 1942ರ ಆಗಸ್ಟಿನಲ್ಲಿ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಇತರ ಸಹೋದ್ಯೋಗಿಗಳೊಂದಿಗೆ ಬಂಧಿಸಲಾಗಿತ್ತು. ಎರಡನೆಯ ಮಹಾಯುದ್ಧ ಮುಗಿದ ಅನಂತರ ಅವರು ಕೇಂದ್ರ ಪಾರ್ಲಿಮೆಂಟರಿ ಬೋರ್ಡಿನ ಸದಸ್ಯರಾದರು. 1946ರಲ್ಲಿ ಅವರು ಸಂಯುಕ್ತ ಪ್ರಾಂತ್ಯಗಳ ವಿಧಾನ ಸಭೆಗೆ ಪುನರಾಯ್ಕೆಯಾದರು. ಅಲ್ಲಿ ಅವರು ಎಂಟು ವರ್ಷಗಳ ಕಾಲ ಮುಖ್ಯ ಮಂತ್ರಿಯಾಗಿದ್ದರು.

	ಪಂತರು ಭಾರತ ಸರ್ಕಾರದ ಗೃಹ ವ್ಯವಹಾರ ಮಂತ್ರಿಯಾಗಿ ನೇಮಕವಾದ್ದು 1955ರ ಜನವರಿಯಲ್ಲಿ. ರಾಜ್ಯಗಳ ಪುನರ್ವಿಂಗಡಣೆ ಆಯೋಗದ ಶಿಫಾರಸುಗಳ ಅನ್ವಯ ಭಾರತದ ಭೂಪಟವನ್ನು ಪುನರ್‍ರೂಪಿಸುವ ಕಾರ್ಯದಲ್ಲಿ ಅವರು ಮಹತ್ತರ ಪಾತ್ರವಹಿಸಿದರು. ಅಲ್ಲದೆ ಸಂಸತ್ತಿನಲ್ಲಿ ಅದಕ್ಕೆ ಅಗತ್ಯವಾದ ವಿಧೇಯಕವನ್ನು ತಂದವರೂ ಅವರೇ. ದೇಶಕ್ಕೆ ಸಲ್ಲಿಸಿದ ಸೇವೆಗಾಗಿ 1957ರಲ್ಲಿ ಪಂತರಿಗೆ ಭಾರತರತ್ನ ಪ್ರಶಸ್ತಿ ನೀಡಲಾಯಿತು. ಪಂತರು 1961ರ ಮಾರ್ಚಿ 7 ರಂದು ನಿಧನರಾದರು.
(ಎಸ್.ಎಸ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ